Home » ಲೈವ್ ನ್ಯೂಸ್ » ಜನಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಜನಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಸರ್ಕಾರಿ ನೌಕರರೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ.


ರಾಯಚೂರು.11 ಆಗಸ್ಟ್ 26: ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಮುಖ್ಯಮಂತ್ರಿಗಳು ರಾಜ್ಯದ ಸಮಸ್ತ ಸರ್ಕಾರಿ ನೌಕರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೃಹತ್ ನೇರ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 11ರ ಮಂಗಳವಾರ ದಂದು ಯಶಸ್ವಿಯಾಗಿ ನಡೆಸಲಾಯಿತು.


ವಿಧಾನಸೌಧದಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಡಿಯೋ ಸಂವಾದದ ಮೂಲಕ ಭಾಗವಹಿಸಿದ್ದರು.
ಈ ವೇಳೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ನಾವು ಮಾಡುವ ಮಂತ್ರಿ ಹುದ್ದೆ ಅಥವಾ ರಾಜಕೀಯ ಸ್ಥಾನಗಳು ಕೇವಲ ಹೆಸರು ಮಾತ್ರ, ಮೂಲತಃ ನಾವೆಲ್ಲವೂ ಸರ್ಕಾರದ ಸೇವಕರು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಜನಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.


ರಾಜ್ಯದಲ್ಲಿ ಏಳು ಕೋಟಿಗಿಂತಲೂ ಹೆಚ್ಚು ಜನರಿದ್ದಾರೆ, ಆದರೆ ಸರ್ಕಾರಿ ನೌಕರರಾಗಿ ಹಾಗೂ ಸಾರ್ವಜನಿಕ ಸೇವೆ ಮಾಡಲು ಸಿಗುವ ಅವಕಾಶ ಕೆಲವೇ ಲಕ್ಷ ಜನರಿಗೆ ಮಾತ್ರ ಲಭ್ಯವಾಗುತ್ತದೆ. ಈ ಭಾಗ್ಯವನ್ನು ಭಗವಂತ ಹಾಗೂ ಹಿರಿಯರ ಆಶೀರ್ವಾದದಿಂದ ಪಡೆದಿದ್ದೇವೆ.

ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದರು. ದೇವರು ಅವಕಾಶವನ್ನು ಮಾತ್ರ ನೀಡುತ್ತಾನೆ, ಶಾಪವನ್ನಲ್ಲ. ಆ ಅವಕಾಶವನ್ನು ನಾವು ಹೇಗೆ ಸಾರ್ವಜನಿಕರ ಒಳಿತಿಗಾಗಿ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಆಧಾರಿತವಾಗಿರುತ್ತದೆ ಎಂದರು.


ಕೆ.ಸಿ. ರೆಡ್ಡಿ, ಖೇಂಗಲ್ ಹನುಮಂತಯ್ಯ ಅವರಿಂದ ಹಿಡಿದು ಪ್ರಸ್ತುತ ಸರ್ಕಾರದವರೆಗಿನ ಮುಖ್ಯಮಂತ್ರಿಗಳು ಹಾಗೂ ನಾಯಕರ ಕೊಡುಗೆಯನ್ನು ಸ್ಮರಿಸಿದ ಅವರು, ವಿಧಾನಸೌಧ ನಿರ್ಮಾಣದ ಸಮಯದಲ್ಲಿ ಜೈಲಿನಲ್ಲಿದ್ದ ಕೈದಿಗಳು ಕೂಡ ಶ್ರಮವಹಿಸಿ ಕಲ್ಲುಗಳನ್ನು ಹೊರಿದ್ದರು. ಅಂತಹ ಇತಿಹಾಸ ಈ ಪವಿತ್ರ ಕಟ್ಟಡಕ್ಕಿದೆ. ‘ವರ್ಕ್ ಈಸ್ ವರ್ಷಿಪ್’ (ಕಾಯಕವೇ ಕೈಲಾಸ) ಎಂಬ ತತ್ವದ ಮೇಲೆ ಇಲ್ಲಿ ಕೆಲಸ ನಡೆಯಬೇಕು ಎಂದರು.


ತಮ್ಮ ವೈಯಕ್ತಿಕ ಜೀವನದ ಹಾದಿಯನ್ನು ಹಂಚಿಕೊAಡ ಡಿ.ಕೆ. ಶಿವಕುಮಾರ್, ನಾನು ಸಣ್ಣ ವಯಸ್ಸಿನಲ್ಲೇ ಪದವಿ ಮುಗಿಸಿ, ಓದುತ್ತಿರುವಾಗಲೇ ರಾಜಕೀಯಕ್ಕೆ ಬಂದವನು. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಾಸಕ, ಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಅನುಭವ ಪಡೆದಿದ್ದೇನೆ. ಈ ಪ್ರತ್ಯಕ್ಷ ಅನುಭವವೇ ನನಗೆ ದೊಡ್ಡ ಶಿಕ್ಷಣವಾಗಿದೆ. ಇತಿಹಾಸವನ್ನು ನಾವು ಗೌರವಿಸಬೇಕು ಎಂದು ಹೇಳಿದರು.


ಜನಸೇವೆಯೇ ಸರ್ಕಾರದ ಆದ್ಯತೆ: ಸರ್ಕಾರಿ ನೌಕರರು ಆಡಳಿತದ ಬೆನ್ನೆಲುಬು. ಸಾರ್ವಜನಿಕರ ಅರ್ಜಿಗಳು ಮತ್ತು ಕುಂದುಕೊರತೆಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಿ, ಭ್ರಷ್ಟಾಚಾರರಹಿತ ಹಾಗೂ ಪಾರದರ್ಶಕ ಸೇವೆ ನೀಡುವ ಮೂಲಕ ಜನಸೇವೆಯೇ ಸರ್ಕಾರದ ಆದ್ಯತೆಯಾಗಬೇಕು ಎಂದು ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ ಸೂಚಿಸಿದರು.


ಈ ವೇಳೆ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ಸರ್ಕಾರವನ್ನು ಸಾರ್ವಜನಿಕರ ಹತ್ತಿರಕ್ಕೆ ಕೊಂಡೊಯ್ಯುವ ಹಾಗೂ ಜನರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವ ಮಹತ್ವಾಕಾಂಕ್ಷೆಯೊoದಿಗೆ ರಾಜ್ಯದಲ್ಲಿ ಪ್ರಜಾಸೇವೆ ಎಂಬ ನೂತನ ಇಲಾಖೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕರ ಸಮಸ್ಯೆಗಳು, ಅಹವಾಲುಗಳನ್ನು ಆಲಿಸಲು ಸೂಕ್ತ ವೇದಿಕೆಗಳ ಕೊರತೆ ಹಾಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಹೊಸ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಪ್ರಜಾಸೇವೆ ಎಂಬ ಪ್ರತ್ಯೇಕ ಇಲಾಖೆಯನ್ನೇ ಆರಂಭಿಸಿ, ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.


ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳು ಹಾಗೂ ವಿವಿಧ ಸಚಿವರ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಿಂದ ಹಿಡಿದು ವಿಧಾನಸೌಧದವರೆಗೂ ಜನರ ಧ್ವನಿಯನ್ನು ಆಲಿಸುವ ಪ್ರಕ್ರಿಯೆ ಜಾರಿಗೆ ಬರಲಿದೆ ಎಂದರು.
ಸರ್ಕಾರದಿAದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದರೂ, ಗ್ರಾಮೀಣ ಭಾಗದಲ್ಲಿ ವಸತಿ, ನಿವೇಶನ (ಸೈಟ್), ಮನೆಗಳ ಕೊರತೆ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇವುಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.


ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು ಹಾಗೂ ನಾಯಕರು ನೂರಾರು ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ಬರ ಪರಿಸ್ಥಿತಿ ಇಂದು ಮರುಕಳಿಸಿದೆ. ರಾಜ್ಯದ ಒಟ್ಟು 236 ತಾಲ್ಲೂಕುಗಳ ಪೈಕಿ ಬರೋಬ್ಬರಿ 164 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಮಳೆಯ ಅಭಾವದಿಂದಾಗಿ ಇಷ್ಟು ದೊಡ್ಡ ಮಟ್ಟದ ಶೇಕಡಾವಾರು ಕೊರತೆ ಉಂಟಾಗಿದೆ ಎಂದರು.


ಇದಕ್ಕೂ ಮುಂಚೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ಅವರು ಮಾತನಾಡಿ, ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ ತೀವ್ರ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸದ ಅಭಾವ ಎದುರಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.

ಇದಕ್ಕಾಗಿ ರಾಜ್ಯದ ವಿಭಾಗೀಯ ಮಟ್ಟದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ. ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಂಡು ಸೂಕ್ತ ಪರಿಹಾರ ಸೂಚಿಸಲು ಕ್ರಮ ವಹಿಸಲಾಗಿದೆ ಎಂದರು.
ರಾಜ್ಯದ ಸುಮಾರು 11 ತಾಲೂಕುಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದೆ. ಜನರ ವಲಸೆ ತಡೆಯಲು ಮತ್ತು ರೈತರ ಹಿತ ಕಾಯಲು ಸರ್ಕಾರ ಆದ್ಯತೆ ನೀಡಿದೆ.


ಅಲ್ಲದೆ ಸಮಸ್ಯೆ ಬಗೆಹರಿಸಲು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ಗಳನ್ನು ರಚಿಸಲಾಗಿದೆ. ಮುಖ್ಯಮಂತ್ರಿಗಳು ಈ ಕಾರ್ಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ತಲಾ 1 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.


ವಿ.ಬಿ. ಜಿ ರಾಮ್‌ಜಿ ಯೋಜನೆ: ಸಮಸ್ಯೆ ನಿವಾರಣೆಗೆ ‘ವಿ.ಬಿ.ಜಿ ರಾಮ್‌ಜಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳು, ನೀರು ಶೇಖರಣೆ ಮತ್ತು ದನದ ಕೊಟ್ಟಿಗೆ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು 10,000 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಯಾರೊಬ್ಬರಿಗೂ ಕುಡಿಯುವ ನೀರು, ಮೇವು ಅಥವಾ ಕೆಲಸದ ಅಭಾವ ಉಂಟಾಗದoತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರಿಗೆ ಪೂರ್ಣ ಸಹಕಾರ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ, ಸಚಿವರಾದ ಸಂತೋಷ ಲಾಡ್, ಡಾ.ಅಜಯ್ ಧರ್ಮಸಿಂಗ್, ವಿಜಯನಂದ್ ಕಾಶಪ್ಪನವರು ಸೇರಿದಂತೆ ವಿವಿಧ ಸಚಿವರು, ಶಾಸಕರು, ವಿವಿಧ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.


ಜಿಲ್ಲೆಯಿಂದ ವಿವಿಧ ಅಧಿಕಾರಿಗಳು ಭಾಗಿ: ಮುಖ್ಯಮಂತ್ರಿಗಳೊoದಿಗೆ ಸರ್ಕಾರಿ ನೌಕರರ ಸಂವಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹೊಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ, ಸರ್ಕಾರಿ ನೌಕರರ ಸಂಘದ ರಾಜ್ಯ ಸಮಿತಿಯ ಸದಸ್ಯರಾದ ಡಾ.ಶಂಕರಗೌಡ ಎಸ್.ಪಾಟೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಂದಿತಾ ಎಮ್.ಎನ್., ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹಮದ್, ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತೆ ಸಂತೋಷ ರಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Author

ಪ್ರಮುಖ ಸುದ್ದಿ

Stock market

Astrology