Home » ಲೈವ್ ನ್ಯೂಸ್ » ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳ ಆದರೆ ಕನ್ನಡ ಭಾಷೆಗಿಲ್ಲ ಪಠ್ಯಕ್ರಮ: ಆತಂಕ’

ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳ ಆದರೆ ಕನ್ನಡ ಭಾಷೆಗಿಲ್ಲ ಪಠ್ಯಕ್ರಮ: ಆತಂಕ’

ಹಾವೇರಿ.14.ಮಾರ್ಚ್.26: ಇಲ್ಲಿಯ ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳಾಗಿದ್ದು, ಬೋಧನೆಯು ಶುರುವಾಗಿದೆ. ಆದರೆ, ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಇದುವರೆಗೂ ಪಠ್ಯಕ್ರಮ ಬಿಡುಗಡೆಯಾಗದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಗುರುವಾರ ಪ್ರತಿಭಟನೆ ನಡೆಸಿದ ಪದವಿ ವಿದ್ಯಾರ್ಥಿಗಳು, ಪಠ್ಯಕ್ರಮ ಬಿಡುಗಡೆ ಮಾಡಲು ವಿಳಂಬ ತೋರುತ್ತಿರುವ ವಿಶ್ವವಿದ್ಯಾಲಯದ ವರ್ತನೆಯನ್ನು ಖಂಡಿಸಿದರು. ‘ಆದಷ್ಟು ಬೇಗ ಪಠ್ಯಕ್ರಮ ಬಿಡುಗಡೆಗೊಳಿಸಿ, ಪಠ್ಯ ಪುಸ್ತಕ ದೊರೆಯುವಂತೆ ನೋಡಿಕೊಳ್ಳಬೇಕು. ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆ ಬಳಿಕ ವಿದ್ಯಾರ್ಥಿಗಳು, ಪ್ರಾಂಶುಪಾಲರಾದ ಫರ್ಜಾನಾ ಪಠಾಣ ಅವರ ಮೂಲಕ ಕುಲಪತಿಗೆ ಮನವಿ ಪತ್ರ ರವಾನಿಸಿದರು.

‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹಲವು ಕಾಲೇಜುಗಳಿವೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ., ಬಿ.ಸಿ.ಎ. ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೋಧನಾ ತರಗತಿಗಳು ಪ್ರಾರಂಭವಾಗಿ ಒಂದು ತಿಂಗಳಾಗಿದೆ. ಅಷ್ಟಾದರೂ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಪಠ್ಯಕ್ರಮವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ’ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.

‘ಪಠ್ಯಕ್ರಮ ವಿಳಂಬದಿಂದಾಗಿ, ಉಪನ್ಯಾಸಕರು ಸಾಮಾನ್ಯ ವಿಷಯಗಳ ಬಗ್ಗೆ ಮಾತ್ರ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿ ಪ್ರಕಾರ ಇನ್ನೊಂದು ವಾರದ ನಂತರ ಕಿರು ಪರೀಕ್ಷೆ ಪ್ರಾರಂಭವಾಗುತ್ತದೆ. ಪರೀಕ್ಷೆಗಳು ಹತ್ತಿರವಿದ್ದರೂ ಪಠ್ಯಕ್ರಮ ನೀಡಿಲ್ಲ. ಜೊತೆಗೆ, ಪಿಡಿಎಫ್‌ ಮಾದರಿಯಲ್ಲೂ ಪಠ್ಯಕ್ರಮ ಒದಗಿಸಿಲ್ಲ’ ಎಂದು ದೂರಿದರು.

‘ಪ್ರತಿ ಬಾರಿಯು ಯಾವುದಾದರೂ ಒಂದು ಗೊಂದಲದಲ್ಲಿ ವಿದ್ಯಾರ್ಥಿಗಳನ್ನು ತಳ್ಳುವ ವ್ಯವಸ್ಥೆ ರೂಢಿಗತವಾಗಿ ಬರುತ್ತಿದೆ. ಈ ವ್ಯವಸ್ಥೆ ನಿಲ್ಲಬೇಕು. ಇದರಿಂದ ಅಭ್ಯಾಸಕ್ಕೆ ಬಾರಿ ಹೊಡೆತ ಬೀಳುತ್ತದೆ. ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಅಧಿಕೃತ ಪಠ್ಯಕ್ರಮ ಬಿಡುಗಡೆ ಮಾಡಿ, ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ವಿದ್ಯಾಲಯದ ಮುಂದೆಯೇ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಸೆಮಿಸ್ಟರ್ ಪರೀಕ್ಷೆ ಕಷ್ಟ: ‘ಕಿರು ಪರೀಕ್ಷೆಗಳು ಮುಗಿಯುತ್ತಿದ್ದಂತೆ ಸೆಮಿಸ್ಟರ್ ಪರೀಕ್ಷೆಗಳು ಹತ್ತಿರವಾಗುತ್ತವೆ. ಪಠ್ಯಕ್ರಮವೇ ಇಲ್ಲದಿದ್ದರೆ, ಯಾವ ವಿಷಯದ ಬಗ್ಗೆ ಪರೀಕ್ಷೆ ಬರೆಯಬೇಕು. ಪ್ರವೇಶಾತಿ ಸಂದರ್ಭದಲ್ಲಿಯೇ ವಿಶ್ವವಿದ್ಯಾಲಯದವರು ಪಠ್ಯಕ್ರಮ ಬಿಡುಗಡೆ ಮಾಡಬೇಕಿತ್ತು. ಆದರೆ, ತಿಂಗಳಾದರೂ ಬಿಡುಗಡೆ ಮಾಡಿಲ್ಲ. ಸೆಮಿಸ್ಟರ್ ಪರೀಕ್ಷೆಗಳು ಹತ್ತಿರವಾದ ದಿನಗಳಲ್ಲಿ ಪಠ್ಯಕ್ರಮ ಬಿಟ್ಟರೆ, ವಿದ್ಯಾರ್ಥಿಗಳಿಗೆ ಓದುವುದು ಹೊರೆಯಾಗಲಿದೆ’ ಎಂದು ಅಳಲು ತೋಡಿಕೊಂಡರು.

‘ಪ್ರತಿಬಾರಿಯೂ ಪದವಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಲೂ ತೊಂದರೆ ಅನುಭವಿಸಿದ್ದೇವೆ. ಈಗ ಪಠ್ಯಕ್ರಮದಿಂದ ತೊಂದರೆ ಆಗುತ್ತಿದೆ’ ಎಂದರು.

ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್, ವೈಷ್ಣವಿ, ಹರ್ಷ ಮೊಗಲಕಟ್ಟಿ, ಗಿರೀಜಾ ಎನ್., ಕವಿತಾ ಗೆಜ್ಜಿಹಳ್ಳಿ, ಭೀಮಣ್ಣ ಕಂಬಳಿ, ಪಲ್ಲವಿ ಗೆಜ್ಜಿಹಳ್ಳಿ, ದಿಳೇಪ್ಪ, ಪ್ರೇಮ‌ಕುಮಾರ್ ಲಮಾಣಿ, ನಾಗರಾಜ, ಆಕಾಶ್ ಪ್ರತಿಭಟನೆಯಲ್ಲಿದ್ದರು.

‘ಹೆಸರಿನ ಗೊಂದಲ’ ‘ಕನ್ನಡ ಭಾಷೆಯ ಪಠ್ಯಕ್ರಮ ಸಿದ್ಧವಾಗಿದೆ. ಆದರೆ ಅದನ್ನು ರಚಿಸಿದ ಸಮಿತಿಯಲ್ಲಿರುವ ಪ್ರಾಧ್ಯಾಪಕರೊಬ್ಬರ ಹೆಸರು ನಮೂದು ವಿಚಾರವಾಗಿ ಗೊಂದಲವಿದೆ’ ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳಿವೆ. ‘ಗೊಂದಲ ನಿವಾರಣೆ ಆಗುತ್ತಿದ್ದಂತೆ. ಪಠ್ಯಕ್ರಮವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿವೆ.

Author

ಪ್ರಮುಖ ಸುದ್ದಿ

Stock market

Astrology