ಚಿತ್ರದುರ್ಗ.11.ಜನವರಿ.26: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಸುಮಾರು ಎರಡು ದಶಕದಿಂದ ಕಡಿಮೆ ವೇತನ, ಜೀವನ ಅಭದ್ರತೆ, ಹೆಚ್ಚು ಕಾರ್ಯಾಭಾರದೊಂದಿಗೆ ಹತ್ತಿಪ್ಪತ್ತು ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾನ್ ಯುಜಿಸಿಯ 6,650 ಅತಿಥಿ ಉಪನ್ಯಾಸಕರು ಇದ್ದ ಕೆಲಸವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಅಂತಿಮವಾಗಿ ಹೋರಾಟದ ಕಹಳೆ ಮೊಳಗಿಸಲು ಸಿದ್ಧರಾಗಿದ್ದಾರೆ.
ಈ ಸಂಬಂಧ ಬೆಂಗಳೂರು ಉಪ್ಪಾರಪೇಟೆ ಇನ್ಸ್ಪೆಕ್ಟರ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಫ್ರೀಡಂ ಪಾರ್ಕ್ನಲ್ಲಿ ಜ. 16ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದು, ಅನುಮತಿ ಜೊತೆಗೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಕೋರಿದ್ದಾರೆ.
ಯುಜಿಸಿ ನಿಯಮ ಪಾಲಿಸಬೇಕೆಂಬ ಹೈಕೋರ್ಟ್ ತೀರ್ಪು ಬಳಿಕ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಷ್ಕರನಿರತ ಅಧ್ಯಾಪಕರ ಬಳಿ ಬಂದು ಕೊಟ್ಟ ಭರವಸೆ ಹುಸಿ ಆಗಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಜ. 1ಕ್ಕೆ ಪೂರ್ಣಗೊಂಡಿದ್ದು, ಈ ಪ್ರಕ್ರಿಯೆಯಿಂದಲೇ ಹೊರಗುಳಿದಿರುವ ನಾನ್ ಯುಜಿಸಿ ಅತಿಥಿ ಉಪನ್ಯಾಸಕರಾದ ನಮ್ಮನ್ನು ಆತಂಕಕ್ಕೆ ಸಿಲುಕಿಸಿದೆ. ಆದ್ದರಿಂದ ಈ ಬಾರಿ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ನಮಗೆ ಜೀವನ ಭದ್ರತೆ ಒದಗಿಸಬೇಕು. ಉದ್ಯೋಗ ಕಾಯಂ, ಗೌರವಧನ ಹೆಚ್ಚಳ, ನಿವೃತ್ತಿ ಬಳಿಕ ಇಡಿಗಂಟು, ಹೊಸ ನೇಮಕಾತಿಯಲ್ಲಿ ಆದ್ಯತೆ ಹೀಗೆ ನಮ್ಮ ಬೇಡಿಕೆ ಈಡೇರಿಸಲೇಬೇಕು ಎಂದು ಆಗ್ರಹಿಸಿ ಮುಷ್ಕರ ಆರಂಭಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.






Any questions related to ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಹೋರಾಟಕೆ ಸಿದ್ಧತೆ..?