Home » ಲೈವ್ ನ್ಯೂಸ್ » ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನರ್‌ರಚನೆ? ಹಲವು ಸಚಿವರಿಗೆ ಗೇಟ್‌ಪಾಸ್!

ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನರ್‌ರಚನೆ? ಹಲವು ಸಚಿವರಿಗೆ ಗೇಟ್‌ಪಾಸ್!

ಹೊಸ ದೆಹಲಿ.27.ಜೂನ್.26: ಕೇಂದ್ರ ಸಂಪುಟ ಪುರಚನೆಗೆ ಸಿದ್ಧತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಶೀಘ್ರವೇ ಸಚಿವ ಸಂಪುಟ ಪುನರ್‌ರಚನೆ ನಡೆಯುವ ಸಾಧ್ಯತೆ ಇದೆ ಎಂಬ ರಾಜಕೀಯ ಚರ್ಚೆಗಳು ಪ್ರಾರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ಪುನರ್‌ರಚನೆಗೆ ಸಮಯ ಕೋರಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.ಸಂಭಾವ್ಯ ಪುನರ್‌ರಚನೆಯಲ್ಲಿ ಹಲವು ಕೇಂದ್ರ ಸಚಿವರು ಹಾಗೂ ಸುಮಾರು ಆರು ಮಂದಿ ರಾಜ್ಯ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ ಧರ್ಮೇಂದ್ರ ಪ್ರಧಾನ್ ಹಾಗೂ ಹರ್ದೀಪ್ ಸಿಂಗ್ ಪುರಿ ಸಚಿವ ಸಂಪುಟದಿಂದ ಹೊರಗುಳಿಯಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.

ಇನ್ನು, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಹಾಗೂ ಪ್ರಧಾನ ಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಕ್ತಿಕಾಂತ ದಾಸ್ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಅದೇ ರೀತಿ, ಇತ್ತೀಚೆಗೆ ವಿವಿಧ ಪಕ್ಷಗಳಿಂದ ಎನ್‌ಡಿಎಗೆ ಸೇರ್ಪಡೆಯಾಗಿರುವ ಕೆಲವು ಸಂಸದರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.

ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ, ಉದ್ಧವ್ ಠಾಕ್ರೆ ಬಣ ತೊರೆದು ಬಂದಿರುವ ಸಂಸದ ಸಂಜಯ್ ದಿನಾ ಪಾಟೀಲ್, ಆಮ್ ಆದ್ಮಿ ಪಕ್ಷದಿಂದ ಬಂದಿರುವ ರಾಘವ್ ಚಡ್ಡಾ ಹಾಗೂ ಅಶೋಕ್ ಮಿತ್ತಲ್ ಸೇರಿದಂತೆ ಹಲವು ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ.

ಆದರೆ, ಈ ಎಲ್ಲ ಹೆಸರುಗಳು ಸದ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಾಗಿದ್ದು, ಸಚಿವ ಸಂಪುಟ ಪುನರ್‌ರಚನೆ ಕುರಿತು ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Author

ಪ್ರಮುಖ ಸುದ್ದಿ

Stock market

Astrology