Home » ಲೈವ್ ನ್ಯೂಸ್ » ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕ ಪ್ರಭು ಚವ್ಹಾಣ ಮನವಿ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕ ಪ್ರಭು ಚವ್ಹಾಣ ಮನವಿ


ಔರಾದ.26.ಜೂನ್.26: ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಜೂನ್ 28 ರಂದು ಬೆಳಿಗ್ಗೆ 10 ಗಂಟೆಗೆ ಕಮಲನಗರ ಪಟ್ಟಣದ ಎಂ.ಎ ಫಂಕ್ಷನ್ ಹಾಲ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶವು ಅನೇಕ ಪ್ರಧಾನ ಮಂತ್ರಿಗಳನ್ನು ಕಂಡಿದೆ. ಆದರೆ ದೇಶದ ಸಾಮಾನ್ಯ ನಾಗರಿಕರೊಂದಿಗೆ ಪ್ರತೀ ತಿಂಗಳು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ನಿರಂತರವಾಗಿ ನೇರ ಸಂವಾದ ನಡೆಸುವ ಪರಂಪರೆಯನ್ನು ಆರಂಭಿಸಿದ ಏಕೈಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಾಗಿದ್ದಾರೆ.

ಈ ಕಾರ್ಯಕ್ರಮದ ಮೂಲಕ ದೇಶದ ವಿವಿಧ ಭಾಗಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ, ಮಹಿಳಾ ಸಬಲೀಕರಣ, ಆತ್ಮನಿರ್ಭರ ಭಾರತ, ಶಿಕ್ಷಣ, ಆರೋಗ್ಯ, ಕೃಷಿ, ಯುವಶಕ್ತಿ, ನವೋದ್ಯಮ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯಂತಹ ಅನೇಕ ಮಹತ್ವದ ವಿಷಯಗಳ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವದಲ್ಲಿ ತನ್ನ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು, ರಾಷ್ಟ್ರದ ಭದ್ರತೆ ಬಲಪಡಿಸುವುದು, ಗಡಿಭಾಗಗಳ ಅಭಿವೃದ್ಧಿ ಹಾಗೂ ಪಾಕಿಸ್ತಾನ ಪ್ರೇರಿತ ಉಗ್ರ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಮೂಲಕ ದೇಶದ ಸುರಕ್ಷತೆ ಮತ್ತು ಸ್ವಾಭಿಮಾನವನ್ನು ಬಲಪಡಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿಯವರ ಮಹತ್ವದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ, ಮಂಡಲದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮನ್ ಕಿ ಬಾತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology